LIVE

ಸೌಜನ್ಯ ಪ್ರಕರಣದ ಮರುತನಿಖೆ ಚುರುಕು: ಫೊರೆನ್ಸಿಕ್ ತಜ್ಞರು, ವಾರ್ಡ್ ಬಾಯ್ ಹಾಗೂ ತಾಯಿ ಕುಸುಮಾವತಿ ವಿಚಾರಣೆ ನಡೆಸಿದ SIT


 ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಕು. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದೆ. ಪ್ರಕರಣದ ವಿವಿಧ ಆಯಾಮಗಳನ್ನು ಪರಿಶೀಲಿಸುತ್ತಿರುವ ವಿಶೇಷ ತನಿಖಾ ತಂಡ (SIT), ಈ ಹಿಂದಿನ ತನಿಖೆಗೆ ಸಂಬಂಧಿಸಿದ ಸಾಕ್ಷಿಗಳು ಹಾಗೂ ವೈದ್ಯಕೀಯ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದವರ ವಿಚಾರಣೆ ನಡೆಸುತ್ತಿದೆ.

ನವೆಂಬರ್ 12ರಂದು ಒಂದೇ ದಿನ ಫೊರೆನ್ಸಿಕ್ ತಜ್ಞರು, ಮರಣೋತ್ತರ ಪರೀಕ್ಷೆ ವೇಳೆ ಹಾಜರಿದ್ದ ವಾರ್ಡ್ ಬಾಯ್ ಹಾಗೂ ಸೌಜನ್ಯ ಅವರ ತಾಯಿ ಕುಸುಮಾವತಿ ಅವರನ್ನು ವಿಚಾರಣೆ ನಡೆಸಿರುವುದು ಪ್ರಕರಣದ ತನಿಖೆಯಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ.

ಸಂತೋಷ್ ರಾವ್ ವೈದ್ಯಕೀಯ ಪರೀಕ್ಷೆ ನಡೆಸಿದ್ದ ತಜ್ಞರ ವಿಚಾರಣೆ

ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಅವರ ವೈದ್ಯಕೀಯ ಪರೀಕ್ಷೆ ನಡೆಸಿದ್ದ ಫೊರೆನ್ಸಿಕ್ ತಜ್ಞ ಡಾ. ಮಹಾಬಲ ಶೆಟ್ಟಿ ಅವರನ್ನು SIT ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ವೈದ್ಯಕೀಯ ವರದಿಯಲ್ಲಿ ಸಂತೋಷ್ ರಾವ್ ಅವರ ದೇಹದಲ್ಲಿ 17 ಗಾಯಗಳಿದ್ದವು ಎಂದು ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆದ ಸಂದರ್ಭ, ಗಾಯಗಳ ಸ್ವರೂಪ ಹಾಗೂ ಅಂದು ನೀಡಲಾಗಿದ್ದ ವರದಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.

ವಿಚಾರಣೆ ಬಳಿಕ ಹೊರಬಂದ ಡಾ. ಮಹಾಬಲ ಶೆಟ್ಟಿ, SIT ವಿಚಾರಣೆಗೆ ಕರೆದ ಹಿನ್ನೆಲೆಯಲ್ಲಿ ಹಾಜರಾಗಿದ್ದೇನೆ ಎಂದು ತಿಳಿಸಿ ಹೆಚ್ಚಿನ ಪ್ರತಿಕ್ರಿಯೆ ನೀಡದೆ ತೆರಳಿದರು.

ಮರಣೋತ್ತರ ಪರೀಕ್ಷೆ ವೇಳೆ ಕರ್ತವ್ಯ ನಿರ್ವಹಿಸಿದ್ದ ವಾರ್ಡ್ ಬಾಯ್ ವಿಚಾರಣೆ

ಸೌಜನ್ಯ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದ ಸಂದರ್ಭದಲ್ಲಿ ವೈದ್ಯರಿಗೆ ಸಹಾಯ ಮಾಡಿದ್ದ ವಾರ್ಡ್ ಬಾಯ್ ಅನಿಲ್ ಕುಮಾರ್ ಅವರನ್ನೂ SIT ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆ, ಮೃತದೇಹದ ಪರಿಶೀಲನೆ ಹಾಗೂ ಅಂದು ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ.

ವಿಚಾರಣೆ ಬಳಿಕ ಮಾತನಾಡಿದ ಅನಿಲ್ ಕುಮಾರ್, ಮರಣೋತ್ತರ ಪರೀಕ್ಷೆಯ ವೇಳೆ ಮೃತದೇಹದ ಮೇಲೆ ನಡೆದ ಪ್ರಕ್ರಿಯೆ ಸೇರಿದಂತೆ ತಮಗೆ ತಿಳಿದಿರುವ ಮಾಹಿತಿಯನ್ನು ಅಧಿಕಾರಿಗಳ ಮುಂದೆ ವಿವರಿಸಿರುವುದಾಗಿ ತಿಳಿಸಿದ್ದಾರೆ.

ಸೌಜನ್ಯ ತಾಯಿ ಕುಸುಮಾವತಿಗೂ ವಿಚಾರಣೆ

ಇದೇ ವೇಳೆ ಸೌಜನ್ಯ ಅವರ ತಾಯಿ ಕುಸುಮಾವತಿ ಅವರಿಗೂ SIT ನೋಟಿಸ್ ನೀಡಲಾಗಿತ್ತು. ನೋಟಿಸ್‌ನಂತೆ ಅವರು ಮಂಗಳೂರಿನ SIT ಕಚೇರಿಗೆ ಹಾಜರಾಗಿದ್ದು, ಅಧಿಕಾರಿಗಳು ಅವರಿಂದ ಪ್ರಕರಣದ ಹಿನ್ನೆಲೆ ಹಾಗೂ ಕುಟುಂಬಕ್ಕೆ ತಿಳಿದಿರುವ ವಿಚಾರಗಳ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ಒಟ್ಟಿನಲ್ಲಿ, ಸೌಜನ್ಯ ಪ್ರಕರಣದ ಮರುತನಿಖೆಯಲ್ಲಿ ವೈದ್ಯಕೀಯ ವರದಿ, ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆ ಹಾಗೂ ಹಿಂದಿನ ತನಿಖೆಗೆ ಸಂಬಂಧಿಸಿದ ಸಾಕ್ಷ್ಯಗಳ ಮರುಪರಿಶೀಲನೆಗೆ SIT ಒತ್ತು ನೀಡಿದೆ. ಮುಂದಿನ ದಿನಗಳಲ್ಲಿ ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ ಮತ್ತು ಯಾವ ಹೊಸ ಸಂಗತಿಗಳು ಹೊರಬರಲಿವೆ ಎಂಬ ಕುತೂಹಲ ಮೂಡಿದೆ.


ಈ ಸುದ್ದಿಯನ್ನು ಹಂಚಿಕೊಳ್ಳಿ

ಪ್ರತಿಕ್ರಿಯೆಗಳು