ಬೆಳ್ತಂಗಡಿ: ಕಳೆದ ಮೂರ್ನಾಲ್ಕು ವರ್ಷಗಳಿಂದ ತೀವ್ರ ಹದಗೆಟ್ಟಿರುವ ಗುರುವಾಯನಕೆರೆ–ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಿಲಿಗೂಡು–ಕುಪ್ಪೆಟ್ಟಿ–ಉಪ್ಪಿನಂಗಡಿ ರಸ್ತೆಯ ದುಸ್ಥಿತಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಕುಪ್ಪೆಟ್ಟಿ ನಾಗರಿಕ ಹೋರಾಟ ಸಮಿತಿಯ ನಿಯೋಗವು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.
ಕಳೆದ ವಾರ ನೂರಾರು ನಾಗರಿಕರ ಭಾಗವಹಿಸುವಿಕೆಯಲ್ಲಿ ನಡೆದ ಪ್ರತಿಭಟನೆಯ ಕುರಿತು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟ ನಿಯೋಗ, ರಸ್ತೆ ಅವ್ಯವಸ್ಥೆಯಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಜಾತಿ, ಧರ್ಮ ಹಾಗೂ ಪಕ್ಷಭೇದವಿಲ್ಲದೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿತು.
ಪ್ರತಿಭಟನೆಯ ವೇಳೆ ರಸ್ತೆ ಕಾಮಗಾರಿ ಆರಂಭಿಸಲು ನವೆಂಬರ್ 16ರವರೆಗೆ ಗಡುವು ನೀಡಲಾಗಿದ್ದು, ಬೇಡಿಕೆ ಈಡೇರದಿದ್ದಲ್ಲಿ ನವೆಂಬರ್ 17ರಂದು ಸಂಪೂರ್ಣ ರಸ್ತೆ ಬಂದ್ ನಡೆಸುವ ನಿರ್ಧಾರದ ಬಗ್ಗೆಯೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ರಸ್ತೆ ಬಂದ್ನಿಂದ ಸಾರ್ವಜನಿಕರಿಗೆ ಮತ್ತಷ್ಟು ತೊಂದರೆಯಾಗುವ ಸಾಧ್ಯತೆಯಿರುವುದರಿಂದ ಬಂದ್ ನಿರ್ಧಾರವನ್ನು ಕೈಬಿಡುವಂತೆ ನಿಯೋಗಕ್ಕೆ ಸಲಹೆ ನೀಡಿದರು. ಅಲ್ಲದೆ, ತಕ್ಷಣವೇ ಕಾಮಗಾರಿ ಆರಂಭಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿಗಳ ಭೇಟಿ ಬಳಿಕ ಮಾತನಾಡಿದ ನಾಗರಿಕ ಹೋರಾಟ ಸಮಿತಿಯ ಮುಖಂಡರು, ರಸ್ತೆಯ ದುಸ್ಥಿತಿಯ ಗಂಭೀರತೆಯನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ದೊರೆತ ಮಾಹಿತಿಯಂತೆ, ಸಮಿತಿ ನೀಡಿರುವ ನವೆಂಬರ್ 16ರ ಗಡುವಿನಂದೇ ಡಾಮರೀಕರಣ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಇದಲ್ಲದೆ, ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶೀಘ್ರದಲ್ಲೇ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಸಮಿತಿ ನಿರ್ಧರಿಸಿದೆ.
ಈ ಸಂದರ್ಭದಲ್ಲಿ ನಾಗರಿಕ ಹೋರಾಟ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ರಹಿಮ್ಮಾನ್ ಬಂಡಸಾಲೆ ಕುಪ್ಪೆಟ್ಟಿ, ಪ್ರಧಾನ ಕಾರ್ಯದರ್ಶಿ ಎನ್.ಎಂ. ಶರೀಫ್ ಸಖಾಫಿ ನೆಕ್ಕಿಲ್, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಬಿ. ಮುಹಮ್ಮದ್ ಅಲಿ ತುರ್ಕಳಿಕೆ, ಸಂಚಾಲಕ ಅಬ್ದುಲ್ ರಹಿಮ್ಮಾನ್ ಪದ್ಮುಂಜ, ಖಾಸಗಿ ಬಸ್ ಮಾಲಕ ಚಾಲಕ ಸಂಘದ ಜಿಲ್ಲಾ ಕೋಶಾಧಿಕಾರಿ ಇಲ್ಯಾಸ್ ಕರಾಯ, ಭೀಮ್ ಆರ್ಮಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಾಧ್ಯಕ್ಷ ಅಣ್ಣು, ಸಾಧನ ಪದ್ಮುಂಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರತಿಕ್ರಿಯೆಗಳು