ಉಡುಪಿ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಉಡುಪಿಯ ನೇಜಾರು ನಾಲ್ವರ ಬರ್ಬರ ಹತ್ಯೆ ಪ್ರಕರಣ ನಡೆದು ನವೆಂಬರ್ 12ಕ್ಕೆ ಮೂರು ವರ್ಷಗಳು ಪೂರ್ಣಗೊಂಡಿವೆ. 2023ರ ನವೆಂಬರ್ 12ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೃಪ್ತಿ ಲೇಔಟ್‌ನಲ್ಲಿ ನಡೆದಿದ್ದ ಈ ಭೀಕರ ಘಟನೆ ಇಂದಿಗೂ ಜನರ ಮನಸ್ಸಿನಲ್ಲಿ ನೋವಿನ ನೆನಪಾಗಿ ಉಳಿದಿದೆ. ಒಂದೇ ಕುಟುಂಬದ ನಾಲ್ವರನ್ನು ಕಳೆದುಕೊಂಡ ಕುಟುಂಬ ನ್ಯಾಯಕ್ಕಾಗಿ ಕಾಯುತ್ತಿದೆ.
ಪ್ರಕರಣದ ವಿಚಾರಣೆ ಸದ್ಯ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈಗಾಗಲೇ 81 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ನಿಗದಿಪಡಿಸಲಾಗಿದೆ. ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬುದು ಮೃತರ ಕುಟುಂಬದ ಒತ್ತಾಯವಾಗಿದೆ.
ಐನಾಝ್ ಮೇಲಿನ ವ್ಯಾಮೋಹವೇ ಹತ್ಯೆಗೆ ಕಾರಣ
ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ನೇಜಾರಿನ ನೂರ್ ಮುಹಮ್ಮದ್ ಅವರ ಪುತ್ರಿ ಐನಾಝ್ ಮೇಲಿನ ಅತಿಯಾದ ವ್ಯಾಮೋಹದಿಂದ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಪ್ರವೀಣ್ ಪ್ರದೀಪ್ ಚೌಗುಲೆ ಹತ್ಯೆಗೆ ಸಂಚು ರೂಪಿಸಿದ್ದನು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
ಯಾವುದೇ ಸುಳಿವು ಸಿಗದಂತೆ ತನ್ನ ಕಾರನ್ನು ಹೆಜಮಾಡಿ ಟೋಲ್‌ಗಿಂತ ಮೊದಲೇ ನಿಲ್ಲಿಸಿದ್ದ ಆರೋಪಿ, ಅಲ್ಲಿಂದ ಆಟೊ, ಬಸ್ ಹಾಗೂ ಬೈಕ್ ಮೂಲಕ ನೇಜಾರು ತಲುಪಿದ್ದನು ಎನ್ನಲಾಗಿದೆ.
2023ರ ನವೆಂಬರ್ 12ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಐನಾಝ್ ಮನೆಗೆ ಪ್ರವೇಶಿಸಿದ ಪ್ರವೀಣ್, ಐನಾಝ್ ಹಾಗೂ ಆಕೆಯನ್ನು ರಕ್ಷಿಸಲು ಬಂದಿದ್ದ ತಾಯಿ ಹಸೀನಾ (48), ಅಕ್ಕ ಅಫ್ನಾನ್ (23) ಮತ್ತು ತಮ್ಮ ಆಸೀಮ್ (13) ಅವರನ್ನು ಚೂರಿಯಿಂದ ಇರಿದು ಹತ್ಯೆಗೈದು ಪರಾರಿಯಾಗಿದ್ದನು.
ಮನೆಯಲ್ಲಿದ್ದ ಹಸೀನಾರ ಅತ್ತೆ ಹಾಜಿರಾ (80) ಅವರಿಗೂ ಗಾಯಗಳಾಗಿದ್ದರೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ನವೆಂಬರ್ 14ರಂದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯನ್ನು ಬಂಧಿಸಿದ್ದರು.
2,202 ಪುಟಗಳ ದೋಷಾರೋಪಣಾ ಪಟ್ಟಿ ಸಲ್ಲಿಕೆ
ಪ್ರಕರಣದ ತನಿಖೆ ನಡೆಸಿದ ಪೊಲೀಸರು 2024ರ ಫೆಬ್ರವರಿ 12ರಂದು ಮೊದಲ ಹಂತದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಬಳಿಕ ಎರಡನೇ ಹಂತದ ದೋಷಾರೋಪಣಾ ಪಟ್ಟಿಯನ್ನೂ ಸಲ್ಲಿಸಲಾಯಿತು.
ಒಟ್ಟು 15 ಸಂಪುಟಗಳಲ್ಲಿ 2,202 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿದ್ದು, ತನಿಖೆಯ ವೇಳೆ 244 ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿತ್ತು.
ನ್ಯಾಯದ ತೀರ್ಪಿಗಾಗಿ ಕುಟುಂಬದ ಕಾಯುವಿಕೆ
ಸದ್ಯ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ಮುಂದುವರಿದಿದೆ. ಈಗಾಗಲೇ 81 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದ್ದು, ಡಿಸೆಂಬರ್ 3ರಂದು ಮುಂದಿನ ವಿಚಾರಣೆ ನಡೆಯಲಿದೆ.
ಮೂರು ವರ್ಷಗಳ ಹಿಂದೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಈ ಪ್ರಕರಣದಲ್ಲಿ ನ್ಯಾಯಾಲಯದ ಅಂತಿಮ ತೀರ್ಪು ಯಾವಾಗ ಹೊರಬೀಳಲಿದೆ ಎಂಬ ನಿರೀಕ್ಷೆಯಲ್ಲಿ ಸಂತ್ರಸ್ತ ಕುಟುಂಬವಿದೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಕುಟುಂಬಸ್ಥರ ಆಗ್ರಹವಾಗಿದೆ.

ಪ್ರತಿಕ್ರಿಯೆಗಳು