ಮೈಸೂರು: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹೆಗ್ಗಳಿಕೆ ಲಭಿಸಿದೆ. ದೇಶದ ಮೊದಲ LED ಡೋಮ್ ತಾರಾಲಯ ಹಾಗೂ ವಿಶ್ವದ ಅತ್ಯಾಧುನಿಕ ಟಿಲ್ಟೆಡ್ LED ಡೋಮ್ ತಾರಾಲಯಗಳಲ್ಲಿ ಒಂದಾದ ‘ಕಾಸ್ಮೋಸ್ ಮೈಸೂರು’ (COSMOS-Mysuru) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ, ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಿರ್ಮಿಸಲಾಗಿರುವ ಈ ಅತ್ಯಾಧುನಿಕ ತಾರಾಲಯವು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (IIA) ವತಿಯಿಂದ ಅಭಿವೃದ್ಧಿಪಡಿಸಲಾಗಿದೆ. ಖಗೋಳ ವಿಜ್ಞಾನ, ಬಾಹ್ಯಾಕಾಶ ಸಂಶೋಧನೆ ಹಾಗೂ ವಿಜ್ಞಾನ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕೇಂದ್ರವನ್ನು ನಿರ್ಮಿಸಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ತಾರಾಲಯದ ಲೋಕಾರ್ಪಣೆಯ ಬಳಿಕ ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಸಂಶೋಧನೆ ಹಾಗೂ ಭವಿಷ್ಯದ ಆವಿಷ್ಕಾರಗಳ ಕುರಿತು ಅವರ ಆಸಕ್ತಿ ಮತ್ತು ಕುತೂಹಲವನ್ನು ಆಲಿಸಿದರು. ವಿದ್ಯಾರ್ಥಿಗಳು ತಮ್ಮ ಪ್ರಶ್ನೆಗಳನ್ನು ಪ್ರಧಾನಿಯವರೊಂದಿಗೆ ಹಂಚಿಕೊಂಡರು.
ಏನಿದರ ವಿಶೇಷತೆ?
ಸುಮಾರು 15 ಮೀಟರ್ ವ್ಯಾಸದ ಟಿಲ್ಟೆಡ್ LED ಡೋಮ್ ಹೊಂದಿರುವ ಈ ತಾರಾಲಯದಲ್ಲಿ ಸುಮಾರು 6,150 LED ಪ್ಯಾನೆಲ್ಗಳು ಹಾಗೂ 4.2 ಕೋಟಿ LED ಅಂಶಗಳನ್ನು ಅಳವಡಿಸಲಾಗಿದೆ. ಸಾಂಪ್ರದಾಯಿಕ ತಾರಾಲಯಗಳಂತೆ ಪ್ರೊಜೆಕ್ಟರ್ ಬಳಸದೆ, ಡೋಮ್ನಲ್ಲಿರುವ LED ಪ್ಯಾನೆಲ್ಗಳ ಮೂಲಕವೇ ಬ್ರಹ್ಮಾಂಡದ ದೃಶ್ಯಗಳನ್ನು ಪ್ರದರ್ಶಿಸುವುದು ಇದರ ವಿಶೇಷತೆ.
8K ಗುಣಮಟ್ಟದ ದೃಶ್ಯಾನುಭವದೊಂದಿಗೆ ಆಕಾಶಗಂಗೆ, ಗ್ರಹಗಳು, ನಕ್ಷತ್ರಗಳು ಹಾಗೂ ಬಾಹ್ಯಾಕಾಶದ ವಿಸ್ಮಯಗಳನ್ನು ಅತ್ಯಂತ ನೈಜವಾಗಿ ವೀಕ್ಷಿಸಲು ಇಲ್ಲಿ ಅವಕಾಶವಿದೆ.
ಇಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಜೊತೆಗೆ ವಿಜ್ಞಾನ ಪ್ರದರ್ಶನ ಮಳಿಗೆ, ವಸ್ತುಸಂಗ್ರಹಾಲಯ, ಉಪನ್ಯಾಸ ಸಭಾಂಗಣ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ಕೇಂದ್ರಗಳನ್ನೂ ಹೊಂದಿದೆ.
ಈ ಯೋಜನೆಯಿಂದ ಮೈಸೂರಿನ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೊಸ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.

ಪ್ರತಿಕ್ರಿಯೆಗಳು