ಬೆಳ್ತಂಗಡಿ: ಉಜಿರೆ ಸಮೀಪದ ನಿಡಿಗಲ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಸಂಗ್ರಹಿಸಿಡಲಾಗಿದ್ದ ಸುಮಾರು ₹2,41,500 ಮೌಲ್ಯದ ವಿದ್ಯುತ್ ಸಾಮಗ್ರಿಗಳನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೊಗ್ರೋಡಿ ಕಂಪೆನಿಯ ಕಲ್ಮಂಜ–ನಿಡಿಗಲ್ ಯಾರ್ಡ್ ಇನ್ಚಾರ್ಜ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬೆಳಾಲು ಗ್ರಾಮದ ರಂಜನ್ (24) ಅವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್ ಪ್ರದೇಶದಲ್ಲಿರುವ ಕಂಪೆನಿಯ ಯಾರ್ಡ್ನಲ್ಲಿ 33 ಕೆವಿ ವಿದ್ಯುತ್ ಮಾರ್ಗ ಸ್ಥಳಾಂತರಿಸುವ ಸಂದರ್ಭದಲ್ಲಿ ತೆರವುಗೊಳಿಸಲಾಗಿದ್ದ ಕೊಯೋಟ್ ವಾಹಕ ಹಾಗೂ ಕಬ್ಬಿಣದ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿತ್ತು.
ನವೆಂಬರ್ 9ರಂದು ಸಾಮಗ್ರಿಗಳು ಸ್ಥಳದಲ್ಲಿರುವುದನ್ನು ಗಮನಿಸಲಾಗಿತ್ತು. ಆದರೆ ನವೆಂಬರ್ 11ರಂದು ಬೆಳಿಗ್ಗೆ ಸುಮಾರು 8 ಗಂಟೆಗೆ ಕೆಲಸಕ್ಕೆ ಬಂದಾಗ ಯಾರ್ಡ್ನ ಕಂಟೈನರ್ ಸಮೀಪ ಇರಿಸಲಾಗಿದ್ದ ವಿದ್ಯುತ್ ಸಾಮಗ್ರಿಗಳು ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ನವೆಂಬರ್ 10ರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಪಿಕಪ್ ವಾಹನದಲ್ಲಿ ಬಂದ ಮೂವರು ಅಪರಿಚಿತರು ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ನವೆಂಬರ್ 11ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 303(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರತಿಕ್ರಿಯೆಗಳು